ಬೆಂಗಳೂರು: ಪ್ರತಿಯೊಬ್ಬರ ಮನೆ ಮನವನ್ನು ರಂಜಿಸುವ ಐಪಿಎಲ್ ಗೆ ದಿನಗಣನೆ ಶುರುವಾಗಿದ್ದು ಎಲ್ಲಾ ತಂಡಗಳು ಭಾರೀ ಸಿದ್ಧತೆಯನ್ನು ನಡೆಸಿವೆ. ಬೆಳಿಗ್ಗೆ ಹೊಸ ಲಾಂಛನದೊಂದಿಗೆ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದ ರಾಯಲ್ ಚಾಂಲೆಂಜರ್ಸ್ ಬೆಂಗಳೂರು ತಂಡ, ನೂತನ ಜರ್ಸಿ ಕೂಡ ಅನಾವರಣ ಮಾಡಿದೆ. ಅದು ಕೂಡ ಪ್ರೇಮಿಗಳ ದಿನವೇ ಬಿಡುಗಡೆಗೊಳಿಸಿರುವುದು ವಿಶೇಷ.
ಪ್ರೇಮಿಗಳ ದಿನಾಚರಣೆಯಂದು ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ತಂಡ ಒಂದರ ಬಳಿಕ ಒಂದರಂತೆ ಭಾರಿ ಸರ್ ಪ್ರೈಸ್ ನೀಡಿದ್ದು, ಶುಕ್ರವಾರ ಬೆಳಗ್ಗೆ ತನ್ನ ನೂತನ ಲೋಗೋ ಬಿಡುಗಡೆ ಮಾಡಿ ಸಂಜೆ ಹೊತ್ತಿಗೆ ತಂಡದ ಹೊಸ ಜರ್ಸಿಯನ್ನೂ ಅನಾವರಣ ಪಡಿಸಿದೆ. ಎರಡು ದಿನದ ಹಿಂದಷ್ಟೇ ಆರ್‌ಸಿಬಿ ಫ್ರಾಂಚೈಸಿ ತನ್ನ ಎಲ್ಲಾ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿನ ಮುಖಪುಟದ ಪೋಟೊಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿತ್ತು.
ಈ ಸಂದರ್ಭದಲ್ಲಿ ಆರ್.ಸಿ.ಬಿ ತಂಡದ ಹೆಸರೇ ಬದಲಾಗಲಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಎಲ್ಲಾ ಊಹಾಪೋಹಗಳಿಗೆ ಶುಕ್ರವಾರ ತೆರೆಬಿದ್ದಿದೆ. ಆದರೂ ನಿರೀಕ್ಷಿತ ಮಟ್ಟಕ್ಕೆ ಆರ್.ಸಿ.ಬಿ ಲೋಗೋದಲ್ಲಿ ಅಂತಹ ಮಹತ್ವದ ಬದಲಾವಣೆಗಳೇನಿಲ್ಲ. ಜೊತೆಗೆ ಹೆಸರಲ್ಲು ಕಿಂಚಿತ್ತೂ ಬದಲಾವಣೆಯಾಗಿಲ್ಲ. ಇಂಗ್ಲಿಷ್ ನಲ್ಲಿದ್ದ ಬ್ಯಾಂಗಲೋರ್ ಬದಲಿಗೆ ಬೆಂಗಳೂರು ಎಂದೇ ಮಾಡಬಹುದಾಗಿತ್ತಾದರೂ ಹಳೇ ಹೆಸರನ್ನೇ ಉಳಿಸಿಕೊಂಡಿದೆ.
ಆರ್.ಸಿ.ಬಿ ಯ ನೂತನ ಲೋಗೊ ವಿಚಾರವನ್ನು ಹೇಳುವುದಾರೆ ಈ ಹಿಂದಿನ ಲಾಂಛನದಲ್ಲಿದ್ದ ವೃತ್ತಾಕಾರವನ್ನು ತೆಗೆದುಹಾಕಿ ಬರಿ ಸಿಂಹದ ಗುರುತ್ತನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸಿಂಹದ ಗುರುತಿಗೆ ಹೆಚ್ಚಿನ ಆದ್ಯತೆ ನೀಡಲಾಗಿರುವ ಹೊಸ ಲಾಂಛನವಾದರೂ ತಂಡದ ಹಣೇ ಬರಹ ಬದಲಾಯಿಸುತ್ತಾ ಕಾದುನೋಡಬೇಕಿದೆ.
ಬೆಳಗ್ಗೆಯಲ್ಲೆಲ್ಲಾ ಹೊಸ ಲಾಂಛನದಿಂದ ಹವಾ ಎಬ್ಬಿಸಿದ್ದ ಆರ್.ಸಿ.ಬಿ ಸಂಜೆ ನೂತನ ಸಮವಸ್ತ್ರ ಹೀಗಿರಲಿದೆ ಎಂಬುದರ ಕುತೂಹಲ ಸಾಮಾಜಿಕ ಜಾಲತಾಣಗಳಲ್ಲಿ ಮೀಡಿಯಾ ವೇದಿಕೆಗಳ ಮೂಲಕ ಹಂಚಿಕೊಂಡಿದೆ. ಇದೇ ವೇಳೆ ತಂಡದ ನೂತನ ಟೈಟಲ್ ಸ್ಪಾನ್ಸರ್ ಮುತ್ತೂಟ್ ಫಿನಾನ್ಸ್ ನ ಲೋಗೊವನ್ನು ಆರ್.ಸಿ.ಬಿ ಜರ್ಸಿ ಮೇಲೆ ಇರಿಸಲಾಗಿದೆ. ಪ್ರೇಮಿಗಳ ದಿನಾಚರಣೆಯಂದು ಹೊಸ ಲಾಂಛನದ ಉಡುಗೊರೆ ನೀಡಿರುವುದು ಫುಲ್ ಕಲರ್ ಫುಲ್ ಆಗಿದೆ.