ವೆಲ್ಲಿಂಗ್ಟನ್‌: ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಟೆಸ್ಟ್‌ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು , ಟೀಮ್‌ ಇಂಡಿಯಾದ ಕೋಚ್‌ ರವಿ ಶಾಸ್ತ್ರಿ 39 ವರ್ಷಗಳ ಹಿಂದೆ ಇದೇ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕ್ಷಣ ನೆನಪಿಸಿಕೊಂಡಿದ್ದಾರೆ. ಹೌದು, ಆ ದಿನಗಳು ಹೇಗಿದ್ದರು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ಭಾರತ ತಂಡದ ಮೂರನೇ ಕ್ರಮಾಂಕದ ಸ್ಟಾರ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ, ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ ಸಲುವಾಗಿ ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ನಾಲ್ಕು ದಶಕಗಳ ಹಿಂದೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ನೆನಪಿನಾಳವನ್ನು ಶಾಸ್ತ್ರಿ ಹೇಳಿದ್ದಾರೆ. 1981ರ ಫೆ.21ರಂದು 19 ವರ್ಷದ ಯುವ ಆಲ್‌ ರೌಂಡರ್‌ ರವಿ ಶಾಸ್ತ್ರಿ, ದಿಗ್ಗಜ ಬ್ಯಾಟ್ಸ್‌ ಮನ್‌ ಸುನಿಲ್‌ ಗವಾಸ್ಕರ್‌ ನಾಯಕತ್ವದ ಭಾರತ ತಂಡಕ್ಕೆ ಇದೇ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಪದಾರ್ಪಣೆ ಮಾಡಿದ್ದರು.
 
"ಅದು 39 ವರ್ಷಗಳ ಹಿಂದೆ. ಒಂದು ಮಾತಿದೆ ಯಾವುದೇ ಒಂದು ಸಂಗತಿ ಮರಳಿ ಬರುತ್ತದೆ ಎಂದು. ನಾಳೆ, ಅಂದು ಇದೇ ದಿನ ಇದೇ ನಗರದ ಇದೇ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ್ದೆ. ನಂಬಲು ಸಾಧ್ಯವಾಗುತ್ತಿಲ್ಲ. ಡ್ರೆಸಿಂಗ್‌ ರೂಮ್‌ ಈಗಲೂ ಹಾಗೆಯೇ ಇದೆ. ಕಿಂಚಿತ್ತೂ ಬದಲಾಗಿಲ್ಲ," ಎಂದು ಶಾಸ್ತ್ರಿ ತಮ್ಮ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡದ ಆಟಗಾರ ದಿಲಿಪ್‌ ದೋಶಿ ಗಾಯಗೊಂಡ ಕಾರಣ ರವಿ ಶಾಸ್ತ್ರಿ ಅವರನ್ನು ಬದಲಿ ಆಟಗಾರನಾಗಿ ಕೂಡಲೇ ನ್ಯೂಜಿಲೆಂಡ್‌ ಗೆ ಕರೆಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ 19ವರ್ಷದ ಯುವ ಕ್ರಿಕೆಟಿಗ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಕಾನ್ಪುರದಲ್ಲಿ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನಾಡುತ್ತಿದ್ದರು. ಪಂದ್ಯದಲ್ಲಿ ಭರ್ಜರಿ ಫರ್ಫಾಮೆನ್ಸ್ ಮೂಲಕ ಗಮನ ಸೆಳೆದಿದ್ದರು. 
 
ಟೆಸ್ಟ್‌ ಕ್ರಿಕೆಟ್‌ ನಲ್ಲಿ 80ಪಂದ್ಯಗಳಿಂದ 3830ರನ್‌ ಗಳನ್ನು ಗಳಿಸಿದ್ದ ರವಿ ಶಾಸ್ತ್ರಿ 151ವಿಕೆಟ್‌ ಗಳನ್ನೂ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ ಆಡಿದ 150ಪಂದ್ಯಗಳಲ್ಲಿ 129ವಿಕೆಟ್‌ಗಳ ಜೊತೆಗೆ 29.04ರ ಸರಾಸರಿಯಲ್ಲಿ 3108ರನ್‌ ಗಳನ್ನು ಗಳಿಸಿದ್ದಾರೆ.

Find out more: