ವೆಲ್ಲಿಂಗ್ಟನ್: ಕಿವೀಸ್ ಪ್ರವಾಸದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ನಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ನಂತರದ ಏಕದಿನ ಸರಣಿಯಲ್ಲಿ ಮುಗ್ಗರಿಸಿತ್ತು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ಕೂಡ ಕಿವೀಸ್ ವಿರುದ್ಧ ಎದ್ದು ನಿಲ್ಲದೆ ಮತ್ತೇ ಮುಗ್ಗರಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹತ್ತು ವಿಕೆಟ್ ಗಳ ಅಂತರದ ಭಾರಿ ಸೋಲನುಭವಿಸಿದೆ. ಇದರೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಮೊದಲ ಬಾರಿಗೆ ಸೋಲಿನ ಅಂಕ ಪಡೆದಿದೆ.
ಮೂರನೇ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದ್ದ ಭಾರತ ಇಂದು 191 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಗೆಲುವಿಗೆ 9 ರನ್ ಗುರಿ ಪಡೆದ ಕಿವೀಸ್ 1.4 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ವಿಜಯದ ನಗೆ ಬೀರಿತು. 25 ರನ್ ಗಳಿಸಿದ್ದ ರಹಾನೆ ಮತ್ತು 15 ರನ್ ಗಳಿಸಿದ್ದ ವಿಹಾರಿ ಇಂದು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ರಹಾನೆ ತನ್ನ ರನ್ ಗೆ ನಾಲ್ಕು ರನ್ ಸೇರಿಸಿ ಔಟಾದರೆ ವಿಹಾರಿ ಯಾವುದೇ ರನ್ ಗಳಿಸಲಿಲ್ಲ. ರಿಷಭ್ ಪಂತ್ 25 ರನ್ ಗಳಿಸಿದರೆ, ಇಶಾಂತ್ ಶರ್ಮಾ 12 ರನ್ ಗಳಿಸಿದರು. ಆದರೆ ಎರಡನೇ ಇನ್ನಿಂಗ್ ನಲ್ಲಿ ಬೌಲಿಂಗ್ ನಲ್ಲಿ ಭಾರೀ ಸ್ಪೆಲ್ ಮಾಡಿದ್ದ ಇಶಾಂತ್ ಶರ್ಮ 5 ವಿಕೆಟ್ ಕಿತ್ತು ಮಿಂಚು ಹರಿಸಿದ್ದರು.
ಟೀಮ್ ಸೌಥಿ ಐದು ವಿಕೆಟ್ ಪಡೆದರೆ, ಬೌಲ್ಟ್ ನಾಲ್ಕು ವಿಕೆಟ್ ಪಡೆದು ಭಾರತದ ಬ್ಯಾಟ್ಸ್ ಮ್ಯಾನ್ ಗಳನ್ನು ಕಾಡಿದರು. ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ ಟಿಮ್ ಸೌಥಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಜಯದೊಂದಿಗೆ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಅನುಭವಿಸಿತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಮೊದಲ ಸೋಲನುಭವಿಸಿದರೆ, ಕಿವೀಸ್ ಟೆಸ್ಟ್ ಇತಿಹಾಸದಲ್ಲಿ 100ನೇ ಜಯ ಸಾಧಿಸಿತು.