ಪರ್ತ್: ವನಿತೆಯರ ಟಿ20 ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲೇ ಚಾಂಪಿಯನ್ ಆಸ್ಟ್ರೇಲಿಯಾ ವನ್ನು ಬಗ್ಗು ಬಡಿದು ಸೋಲಿಸಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ವನಿತಾ ತಂಡ ಇದೀಗ ಬಾಂಗ್ಲಾ ದೇಶವನ್ನು ಸೋಲಿಸಿದೆ. ಭಾರತ ನೀಡಿದ 143 ರನ್ ಗಳ ಸವಾಲನ್ನು  ಬೆನ್ನಟ್ಟದ ಬಾಂಗ್ಲಾ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಹರ್ಮನ್ ಪ್ರೀತ್ ಕೌರ್ ಪಡೆ ವಿಶ್ವ ಟಿ20 ವಿಶ್ವಕಪ್ ಕೂಟದಲ್ಲಿ ಸತತ ಎರಡನೇ ಜಯ ದಾಖಲಿಸಿ ಗೆಲುವಿನ ಮಿಂಚಿನ ಓಟ ಮುಂದುವರೆಸಿದರೆ.
 
ಭಾರತದ ನೀಡಿದ 143ರನ್ ಚೇಸ್ ಮಾಡಲು ಮುಂತಾದ ಬಾಂಗ್ಲಾ ತಂಡಕ್ಕೆ ಆರಂಭಿಕ ಆಟಗಾರ್ತಿ ಮುರ್ಷಿದಾ ಖಟೂನ್ (30) ಅವರು ಆಸರೆಯಾಗಿದ್ದು ಬಿಟ್ಟರೆ, ಅಗ್ರ ಕ್ರಮಾಂಕದ ಆಟಗಾರ್ತಿಯರಿಂದ ಅವರಿಗೆ ಉತ್ತಮ ಬೆಂಬಲ ದೊರಕಲಿಲ್ಲ. ಇನ್ನೋರ್ವ ಆರಂಭಿಕ ಆಟಗಾರ್ತಿ ಶಮೀನಾ ಸುಲ್ತಾನ ಅವರು ಕೇವಲ 3 ರನ್ ಗಳಿಸಿ ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ನಿಗರ್ ಸುಲ್ತಾನ (35) ಅವರ ಬ್ಯಾಟಿಂಗ್ ಬಾಂಗ್ಲಾ ಗೆಲುವಿನ ಆಸೆಯನ್ನು ಜೀವಂತವಿರಿಸಿತ್ತು. ಆದರೆ ಭಾರತದ ಮಹಿಳಾ ಬೌಲರ್ ಗಳ ಬಿಗು ದಾಳಿಗೆ ಕಂಗೆಟ್ಟ ಬಾಂಗ್ಲಾ ಮಹಿಳಾ ಬ್ಯಾಟ್ಸ್ ಮನ್ ಗಳು ಜಯದ ಗುರಿಯನ್ನು ತಲುಪುವಲ್ಲಿ ಎಡವಿದರು. ಅಂತಿಮವಾಗಿ 20 ಓವರುಗಳಲ್ಲಿ ಬಾಂಗ್ಲಾ 8 ವಿಕೆಟ್ ಗಳನ್ನು ಕಳೆದುಕೊಂಡು 124 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
 
ವನಿತಾ ಟೀಂ ಇಂಡಿಯಾ ಪರ ಲೆಗ್ ಬ್ರೇಕ್ ಗೂಗ್ಲಿ ಬೌಲರ್ ಪೂನಮ್ ಯಾದವ್ ಅವರು 4ಓವರ್ ಗಳಲ್ಲಿ 18 ರನ್ ನೀಡಿ 3ವಿಕೆಟ್ ಪಡೆದು ಮಿಂಚಿದರು. ಇನ್ನು 4ಓವರ್ ಗಳಲ್ಲಿ ಕೇವಲ 14ರನ್ ನೀಡಿ 2ವಿಕೆಟ್ ಪಡೆದ ಮಧ್ಯಮ ವೇಗಿ ಶಿಖಾ ಪಾಂಡೆ ಭಾರತದ ಪರ ಯಶಸ್ವೀ ಬೌಲರ್ ಎನಿಸಿದರೆ ಅರುಂಧತಿ ರೆಡ್ಡಿ ದುಬಾರಿಯಾಗಿ 2ವಿಕೆಟ್ ಬಲಿಪಡೆದರು. ಬಾಂಗ್ಲಾ ದೇಶದ ಪರ ನಿಗರ್ ಸುಲ್ತಾನ (35) ಟಾಪ್ ಸ್ಕೋರರ್ ಎಣಿಸಿಕೊಂಡರೆ ಉಳಿದಂತೆ ಮುರ್ಷಿದಾ ಖಟೂನ್ (30), ‍ಫಾತಿಮಾ ಖಟೂನ್ (17), ರುಮಾನ ಅಹಮ್ಮದ್ (13) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು
 
 
 

Find out more: