ಮೆಲ್ಬರ್ನ್: ನ್ಯೂಜಿಲೆಂಡ್ ತಂಡವನ್ನು 3 ರನ್‍ ಗಳಿಂದ ಸೋಲಿಸಿದ ಭಾರತವು ಹ್ಯಾಟ್ರಿಕ್ ಗೆಲುವಿನೊಂದಿಗೆ ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್‍ ಗೆ ಲಗ್ಗೆ ಇಟ್ಟು ಪಾರಮ್ಯ ಮೆರೆದಿದೆ. ಹೌದು, ಮಹಿಳಾ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮೂರು ಹ್ಯಾಟ್ರಿಕ್ ಪಂದ್ಯಗಳನ್ನು ಗೆದ್ದು ಬೀಗಿದೆ. 
 
ಮೆಲ್ಬರ್ನ್ ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವನಿತಾ ಟೀಂ ಇಂಡಿಯಾವು ಕೊನೆಯ ಓವರಿನಲ್ಲಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‍ಗೆ 133 ರನ್ ಗಳಿಸಿತ್ತು. ಆದರೆ ನ್ಯೂಜಿಲೆಂಡ್ ತಂಡವು 20 ಓವರ್ ಗಳಲ್ಲಿ ಒಟ್ಟು 6 ವಿಕೆಟ್‍ ನಷ್ಟಕ್ಕೆ 130 ರನ್ ಗಳಿಸಿ 3 ರನ್ ಗಳಿಂದ ಸೋಲೊಪ್ಪಿಕೊಂಡಿತು. 
 
ಪಂದ್ಯದ ಕೊನೆಯ ಘಟ್ಟ ಅತೀ ರೋಚಕತೆಯಿಂದ ಕೂಡಿತ್ತು. ಕೊನೆಯ ಮೂರು ಓವರ್ ಗಳಲ್ಲಿ 40 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ನ್ಯೂಜಿಲೆಂಡ್ 18ನೇ ಓವರಿನಲ್ಲಿ 6 ರನ್ ಗಳಿಸಿದರೆ 19ನೇ ಓವರಿನಲ್ಲಿ 18 ರನ್ ಗಳಿಸಿತ್ತು. ಪೂನಂ ಯಾದವ್ ಎಸೆದ ಈ ಓವರಿನಲ್ಲಿ ಕೇರ್ 4 ಬೌಂಡರಿ, 2 ರನ್ ಹೊಡೆದ ಪರಿಣಾಮ 18 ರನ್ ಹರಿದು ಬಂದಿತ್ತು. ಕೊನೆಯ 6 ಎಸೆತಗಳಲ್ಲಿ 16 ರನ್ ಬೇಕಿತ್ತು. ಪಾಂಡೆ 20ನೇ ಓವರಿನಲ್ಲಿ 2 ಬೌಂಡರಿ ಮತ್ತು 3 ರನ್ ಬಿಟ್ಟು ರೋಚಕವಾಗಿ ಪಂದ್ಯ ಗೆದ್ದು ದಾಖಲೆ ಬರೆಯಿತು. 
 
 ಕೊನೆಯ ಮೂರು ಓವರಿನಲ್ಲಿ ಅಮೆಲಿಯಾ ಕೆರ್ 5ಬೌಂಡರಿ ಸೇರಿ 25 ರನ್ ಸಿಡಿಸಿದರು. ಜೆನ್ಸನ್ ಕೂಡ 1ಬೌಂಡರಿ ಸೇರಿ 10ರನ್ ಪೇರಿಸಿದರು. ಆದರೆ ನಿಗದಿತ 20ಓವರ್ ಗಳ ಮುಕ್ತಾಯಕ್ಕೆ ಕಿವೀಸ್ 130ರನ್ ಗಳಿಸಿತು. ಭಾರತದ ಪರ ಶೆಫಾಲಿ ವರ್ಮಾ ಅತಿ ಹೆಚ್ಚು 46ರನ್ (34ಎಸೆತ, 4ಬೌಂಡರಿ, 3ಸಿಕ್ಸರ್) ಗಳಿಸಿದರೆ, ತಾನಿಯಾ ಭಾಟಿಯಾ 23ರನ್ (25 ಎಸೆತ, 3 ಬೌಂಡರಿ) ದಾಖಲಿಸಿದರು. ಶೆಫಾಲಿ ವರ್ಮಾ ಪಂದ್ಯ ಶ್ರೇಷ್ಠಕ್ಕೆ ಭಾಜನರಾಗಿದ್ದಾರೆ.

Find out more: