ನವದೆಹಲಿ: ಭಾರತದ ವನಿತಾ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಈ ಪ್ರಯಾಣದಲ್ಲಿ ಹರಿಯಾಣದ 16 ವರ್ಷದ ಶೆಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೆಫಾಲಿ ವರ್ಮಾ ಬಗ್ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಹಾಗೂ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ರಾಕ್ ಸ್ಟಾರ್ ಶಫಾಲಿ ಎಂದಿದ್ದಾರೆ.
ಶಫಾಲಿ ಶರ್ಮ ಕುರಿತು ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, ಶೆಫಾಲಿ ಅವರನ್ನು ರಾಕ್ ಸ್ಟಾರ್ ಎಂದು ಬಣ್ಣಿಸಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡಕ್ಕೆ ಅಭಿನಂದನೆ ಎಂದು ತಿಳಿಸಿದ್ದಾರೆ. ಭಾರತದ ಶೆಫಾಲಿ ವರ್ಮಾ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 34 ಎಸೆತಗಳಲ್ಲಿ 46 ರನ್ ಗಳಿಸಿದರು. ಈ ಪಂದ್ಯದಲ್ಲಿ ಉಳಿದ ಯಾವುದೇ ಆಟಗಾರರು ಉತ್ತಮ ಬ್ಯಾಟಿಂಗ್ ತೋರಲಿಲ್ಲ. ಮಹಿಳಾ ಟಿ20 ವಿಶ್ವಕಪ್ ನಲ್ಲಿ ಶೆಫಾಲಿ ವರ್ಮಾ ಇದುವರೆಗೆ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಪಂದ್ಯಶ್ರೇಷ್ಠಕ್ಕೆ ಭಾಜನ ರಾಗಿದ್ದು ಶಫಾಲಿ ವನಿತಾ ತಂಡದ ಭವಿಷ್ಯದ ಆಟಗಾರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಶೆಫಾಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ನ ಮಾಜಿ ನಾಯಕ ನಾಸಿರ್ ಹುಸೇನ್, ಶೆಫಾಲಿ ತುಂಬಾ ಗಂಭೀರವಾಗಿ ಆಡುತ್ತಾರೆ. ಜೊತೆಗೆ ಅವರು ಅದ್ಭುತಗಳನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದು ಭವಿಷ್ಯದ ಆಟಗಾರ್ತಿ ಎಂದಿದ್ದಾರೆ.
ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮಾತನಾಡಿ, ಮಹಿಳಾ ಕ್ರಿಕೆಟ್ ವೀಕ್ಷಿಸಲು ಜನರನ್ನು ಕ್ರೀಡಾಂಗಣಕ್ಕೆ ಕರೆತರುವ ಶಕ್ತಿ ಶೆಫಾಲಿಗೆ ಇದೆ. ಅವರನ್ನು ಬೇರೆಯವರಿಗೆ ಹೋಲಿಸಲು ನಾನು ಬಯಸುವುದಿಲ್ಲ. ಆದರೆ ಶೆಫಾಲಿ ಖಂಡಿತವಾಗಿಯೂ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತಾಳೆ ಎಂದು ನಾನು ಹೇಳುತ್ತೇನೆ. ಆಕ್ರಮಣಕಾರಿ ಬ್ಯಾಟಿಂಗ್ ಶೆಫಾಲಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ