ನವದೆಹಲಿ: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಹೌದು, ಅದರ ಜೊತೆಗೆ ಭಾನುವರವಷ್ಟೇ 2 ಪಂದ್ಯಗಳನ್ನು ನಡೆಸಿ ಉಳಿದ ದಿನಗಳೆಲ್ಲಾ ಒಂದೇ ಪಂದ್ಯ ನಡೆಸಲು ತೀರ್ಮಾನಿಸಿದೆ.
ಮಾ. 29ರಂದು ಆರಂಭವಾಗಲಿರುವ 2020 ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು “ವಾಂಖೇಡೆ ಸ್ಟೇಡಿಯಂ’ನಲ್ಲಿ ಸೆಣಸಲಿವೆ. ಕಳೆದ ವರ್ಷ 8ನೇ ಸ್ಥಾನಕ್ಕೆ ಕುಸಿದಿದ್ದ ರಾಯಲ್ ಚಾಲೆಂಜರ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಮಾ. 31ರಂದು ಆಡಲಿದೆ. ಎದುರಾಳಿ ಕೋಲ್ಕತಾ ನೈಟ್ ರೈಡರ್. ಈ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾ. 29ರಂದು ಮೊದಲ್ಗೊಳ್ಳುವ ಪಂದ್ಯಾವಳಿ ಮೇ 24ರಂದು ಕೊನೆಗೊಳ್ಳಲಿದೆ. ಮೇ 17ರ ತನಕ, ಒಟ್ಟು 50 ದಿನಗಳ ಕಾಲ ಲೀಗ್ ಪಂದ್ಯಗಳು ಸಾಗುತ್ತವೆ. ನಾಕೌಟ್ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನಷ್ಟೇ ರೂಪಿಸಬೇಕಿದೆ.
ಪ್ರಸಕ್ತ ಸಾಲಿನ ಐಪಿಎಲ್ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಒಂದೊಂದೇ ಪಂದ್ಯವನ್ನು ಆಡಲಾಗುವುದು. 6 ರವಿವಾರದಂದು 2 ಮುಖಾಮುಖೀ ಏರ್ಪಡಲಿದೆ. ಶನಿವಾರ ಎರಡರ ಬದಲು ಒಂದೇ ಪಂದ್ಯ ನಡೆಯುತ್ತದೆ. ಇದನ್ನು ಸರಿದೂಗಿಸಲು ಐಪಿಎಲ್ ಕೂಟದ ಒಟ್ಟು ಅವಧಿಯನ್ನು ಒಂದು ವಾರ ವಿಸ್ತರಿಸಲಾಗಿದೆ.ಪಂದ್ಯಗಳ ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರಿಯ ಪಂದ್ಯಗಳೆಲ್ಲ 8 ಗಂಟೆಗೆ ಆರಂಭವಾಗಲಿವೆ. ಹಗಲು ಪಂದ್ಯ ಸಂಜೆ 4 ಗಂಟೆಗೆ ಮೊದಲ್ಗೊಳ್ಳುತ್ತದೆ. ರಾಜಸ್ಥಾನ್ ರಾಯಲ್ಸ್ ತನ್ನ 2 “ತವರು ಪಂದ್ಯ’ಗಳನ್ನು ಗುವಾಹಟಿಯಲ್ಲಿ ಆಡುವ ಸಾಧ್ಯತೆ ಇದೆ. ಉಳಿದ ಫ್ರಾಂಚೈಸಿಗಳ ತವರು ತಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಬಹು ಕುತೂಹಲ ಮೂಡಿಸಿರುವ ಈ ಐಪಿಎಲ್ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದ್ದು, ಕ್ರಿಕೆಟ್ ಪ್ರೇಮಿಗಳೆಲ್ಲಾ ಈಗಾಗಲೇ ತುದಿಗಾಲಲ್ಲಿ ನಿಂತು ಐಪಿಎಲ್ ಪ್ರಾರಂಭಕ್ಕೋಸ್ಕರ ಕಾಯುತ್ತಿದ್ದಾರೆ. ಪ್ರಸ್ತುತ ಐಪಿಎಲ್ ನ ಮೊದಲ ಪಂದ್ಯದಲ್ಲಿ ಚಾಂಪಿಯನ್ ವರ್ಸಸ್ ಚಾಂಪಿಯನ್ ಅಂದರೆ ಮುಂಬೈ ವರ್ಸಸ್ ಚೆನ್ನೈ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಭಾರಂಭಕ್ಕಾಗಿ ಸೆಣಸಲಿವೆ.