ಇಲ್ಲಿನ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಜಯ ಸಾಧಿಸಿತು. ಮುಂಬೈ ಇಂಡಿಯನ್ಸ್ ನೀಡಿದ್ದ 196 ರನ್ಗಳ ಗುರಿ ಬೆನ್ನತ್ತಿದ ಕೋಲ್ಕತ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು.






ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭಮಾನ್ ಗಿಲ್ (7) ಹಾಗೂ ಸುನೀಲ್ ನರೇನ್ (9) ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ತಂಡವು 25 ರನ್ಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ನಾಯಕ ದಿನೇಶ್ ಕಾರ್ತಿಕ್ (30), ನಿತೀಶ್ ರಾಣ (24) ಜತೆಗೂಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಆಘಾತ ನೀಡಿದರು. ಕೇವಲ 77 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಕೋಲ್ಕತ ಗೆಲವಿನ ಆಸೆಯನ್ನು ಕೈ ಚೆಲ್ಲಿತು.








ಬಳಿಕ ಬಂದ ಆಯಂಡ್ರೆ ರಸೆಲ್ (11), ಇಯಾನ್ ಮಾರ್ಗನ್ (16) ಮತ್ತು ನಿಖಿಲ್ ನಾಯಕ್ (1) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಔಟಾಗಿದ್ದು, ಕೋಲ್ಕತ ಪಾಳಯಕ್ಕೆ ಸೋಲು ಬಹುತೇಕ ಖಚಿತವಾಯಿತು. ಕೊನೆಯಲ್ಲಿ ಕೇವಲ 12 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ನೆರವಿನಿಂದ ಪ್ಯಾಟ್ ಕ್ಯೂಮಿನ್ಸ್ ಅಬ್ಬರಿಸಿದ್ದು, ಕೋಲ್ಕತ ಪಾಳಯಕ್ಕೆ ಗೆಲುವಿನ ಆಸೆ ಚಿಗುರಿತ್ತು. ಆದರೆ, ಕ್ಯೂಮಿನ್ಸ್ ಕ್ಯಾಚಿತ್ತು ನಿರ್ಗಮಿಸಿದ್ದು, ಸೋಲು ನಿಶ್ಚಿತವಾಯಿತು. ಉಳಿದಂತೆ ಶಿವಂ ಮವಿ (9) ರನ್ ಗಳಿಸಿ ಔಟಾದರೆ, ಕುಲದೀಪ್ ಯಾದವ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.






ಮುಂಬೈ ಪರ ಟ್ರೆಂಟ್ ಬೋಲ್ಟ್, ಜೇಮ್ಸ್ ಪ್ಯಾಟಿನ್ಸನ್, ಜಸ್ಪ್ರಿತ್ ಬೂಮ್ರಾ ಮತ್ತು ರಾಹಲ್ ಚಾಹರ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಕೀರನ್ ಪೋಲಾರ್ಡ್ 1 ವಿಕೆಟ್ ಪಡೆದರು.







ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿತು. ತಂಡದ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್ ಶರ್ಮಾ ಜತೆಗೂಡಿದ ಸೂರ್ಯಕುಮಾರ್ ಯಾದವ್ 90 ರನ್ಗಳ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 47 ರನ್ ಕಲೆಹಾಕಿದ್ದ ಯಾದವ್ ರನೌಟ್ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಬಳಿಕ ಬಂದ ಸೌರಭ್ ತಿವಾರಿಯು ಸಹ 21 ರನ್ಗಳ ಕಾಣಿಕೆ ನೀಡಿ ಪೆವಲಿಯನ್ ಸೇರಿದರು.






ಇತ್ತ ಆರಂಭದಿಂದಲೂ ಸ್ಫೋಟಿಸಿದ ರೋಹಿತ್ ಶರ್ಮಾ 6 ಸಿಕ್ಸರ್, 3 ಬೌಂಡರಿ ನೆರವಿನೊಂದಿಗೆ ಭರ್ಜರಿ 80 ರನ್ ಕಲೆಹಾಕುವ ಮೂಲಕ ನಾಯಕ ಜವಬ್ದಾರಿಯುತ ಆಟವಾಡಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ (18) ರನ್ ಗಳಿಸಿ ಔಟಾದರೆ, ಕೀರನ್ ಪೊಲಾರ್ಡ್ (11*) ಮತ್ತು ಕೃನಾಲ್ ಪಾಂಡ್ಯ (1*) ಅಜೇಯರಾಗಿ ಉಳಿದರು. ಕೋಲ್ಕತ ಪರ ಶಿವಮ್ ಮವಿ 2 ವಿಕೆಟ್ ಪಡೆದರೆ, ಸುನೀಲ್ ನರೇನ್ ಮತ್ತು ಆಯಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.

Find out more: