ಕೊನೆಗೂ ಲಯ ಕಂಡ ಕ್ವಿಂಟನ್ ಡಿಕಾಕ್ (67 ರನ್, 39 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 34 ರನ್‌ಗಳಿಂದ ಗೆಲುವು ದಾಖಲಿಸಿದೆ.
ಭಾನುವಾರದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ನಾಯಕ ಡೇವಿಡ್ ವಾರ್ನರ್ ಹೋರಾಟದಿಂದ (60 ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಯಶಸ್ವಿ ಚೇಸಿಂಗ್ ನಡೆಸುವ ಲಕ್ಷಣ ತೋರಿದರೂ, ಮುಂಬೈ ಇಂಡಿಯನ್ಸ್ ತಂಡದ ಸಂಘಟಿತ ಬೌಲಿಂಗ್ ನಿರ್ವಹಣೆಯ ಎದುರು ಶಾರ್ಜಾದ ಕಿರು ಮೈದಾನದ ಲಾಭವೆತ್ತಲು ವಿಲವಾಯಿತು.
ಟಾಸ್ ಗೆದ್ದ ಮುಂಬೈ ತಂಡ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಆಯ್ದುಕೊಂಡು 5 ವಿಕೆಟ್‌ಗೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್ ತಂಡ ಒಂದು ಹಂತದಲ್ಲಿ ಯಶಸ್ವಿ ಚೇಸಿಂಗ್ ನಡೆಸುವತ್ತ ಮುನ್ನಡೆದಿತ್ತು. ಆದರೆ ಕೊನೇ 5 ಓವರ್‌ಗಳಲ್ಲಿ ಮುಂಬೈ ಬೌಲರ್‌ಗಳು ಮೇಲುಗೈ ಸಾಧಿಸಿದರು. ಇದರಿಂದಾಗಿ ಸನ್‌ರೈಸರ್ಸ್ ತಂಡ 7 ವಿಕೆಟ್‌ಗೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ವೇಗಿಗಳಾದ ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್‌ಸನ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಬಳಿಸಿದರು.
ಮೊದಲ 4 ಪಂದ್ಯಗಳ ರನ್‌ಬರವನ್ನು 5ನೇ ಪಂದ್ಯದಲ್ಲಿ ನೀಗಿಸಿಕೊಂಡ ವಿಕೆಟ್ ಕೀಪರ್-ಆರಂಭಿಕ ಕ್ವಿಂಟನ್ ಡಿಕಾಕ್ ಹಾಕಿಕೊಟ್ಟ ಭದ್ರ ಬುನಾದಿಯಿಂದ ಮುಂಬೈ ತಂಡ ಬೃಹತ್ ಮೊತ್ತ ಪೇರಿಸಿತು. ನಾಯಕ ರೋಹಿತ್ ಶರ್ಮ (6) ಪಂದ್ಯದ 5ನೇ ಎಸೆತದಲ್ಲೇ ಔಟಾದ ಬಳಿಕ ಡಿಕಾಕ್ ತಂಡಕ್ಕೆ ಆಧಾರವಾಗಿ ನಿಂತರು. ಅವರಿಗೆ ಸೂರ್ಯಕುಮಾರ್ ಯಾದವ್ (27), ಇಶಾನ್ ಕಿಶನ್ (28) ಸಮರ್ಥ ಬೆಂಬಲ ಒದಗಿಸಿದರು. ಇವರಿಬ್ಬರ ಜತೆ ಕ್ರಮವಾಗಿ 42 ಮತ್ತು 78 ರನ್ ಜತೆಯಾಟವಾಡಿದ ಡಿಕಾಕ್ 32 ಎಸೆತಗಳಲ್ಲಿ ಟೂರ್ನಿಯ ಮೊದಲ ಅರ್ಧಶತಕ ಪೂರೈಸಿದರು. ಡಿಕಾಕ್ ಇನಿಂಗ್ಸ್‌ಗೆ ಸ್ಪಿನ್ನರ್ ರಶೀದ್ ಖಾನ್ ಬ್ರೇಕ್ ಹಾಕಿದ ಬಳಿಕ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ (28) ಮತ್ತು ಕೈರಾನ್ ಪೊಲ್ಲಾರ್ಡ್ (25) ಸ್ಫೋಟಕ ಆಟದ ಮೂಲಕ ಮೊತ್ತ ಹಿಗ್ಗಿಸಿದರು. ಇವರಿಬ್ಬರು 26 ಎಸೆತಗಳಲ್ಲಿ 41 ರನ್ ಕಸಿದರು. ಕೊನೆಯಲ್ಲಿ ಸಿದ್ಧಾರ್ಥ್ ಕೌಲ್ ಎಸೆದ ಇನಿಂಗ್ಸ್‌ನ ಕೊನೆಯ 4 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ 20 ರನ್ ಕಸಿದ ಕೃನಾಲ್ ಪಾಂಡ್ಯ ಮುಂಬೈ ಮೊತ್ತ 200ರ ಗಡಿ ದಾಟಲು ನೆರವಾದರು.